ಮುಕ್ಕುವರು ಭಂಗಿಯ ಸಕ್ಕರೆ ಇರಲ್ಕೆ
ಸ್ವಸ್ತ್ರೀ ಇದ್ದಂತೆ ಪರಸ್ತ್ರೀಯರಿಗೆ ಅಳುಪುವರು
ಸತ್ತ ನಾಯ ಭಕ್ಷಿಸುವ ಹಡಕಿಗರನೇನೆಂಬೆನಯ್ಯ ರಾಮನಾಥ ?
ಇತ್ತ ಬಾ ಎನ್ನದವನ, ಹತ್ತೆ ಹೊದ್ದಲು ಬೇಡ
ಇತ್ತ ಬಾ ಎಂಬ ಸದ್ಭಕ್ತನ ಮನೆಯ ಬಾಗಿಲು
ಹತ್ತಿಪ್ಪೆ ಕಾಣಾ ರಾಮನಾಥ |
ಭಕ್ತರ ಮಠವೆಂದು ಭಕ್ತ ಹೋದಡೆ
ಆ ಭಕ್ತ ಭಕ್ತಂಗೆ ಅಡಿ ಇಟ್ಟು ಇದಿರೆದ್ದು ನಡೆದು
ಹೊಡೆಗೆಡೆದು ಒಡಗೊಂದು ಬಂದು
ವಿಭೂತಿ ವೀಳೆಯವನಿಕ್ಕಿ ಪಾದಾರ್ಚನೆಯ ಮಾಡಿ
ಸಮಯವನರಿತು ಲಿಂಗಾರ್ಚನೆಯ ಮಾಡಿಸಿ
ಒಕ್ಕುದ ಕೊಂಡು ಓಲಾಡುತಿಪ್ಪುದೆ ಭಕ್ತಿ
ಹೀಗಲ್ಲದೆ ಬೆಬ್ಬನೆ ಬೆರೆತು, ಬಿಬ್ಬನೆ ಬೀಗಿ
ಅಹಂಕಾರಿಭರಿತನಾಗಿಪ್ಪವನ ಮನೆಯ
ಲಿಂಗಸನುಮತರು ಹೊಗರು ಕಾಣಾ ರಾಮನಾಥ !
ಗುರು ನಿರೂಪವ ಮಾಡರು
ಪರವಧುವ ನೆರವರು, ಪರಧನವನಳುಪುವರು
ಗುರುವಿಲ್ಲವವರಿಗೆ; ಪರವಿಲ್ಲವವರಿಗೆ,
ಇಂತಪ್ಪ ನರಕಿಗಳನೆನಗೊಮ್ಮೆ ತೋರದಿರಾ ರಾಮನಾಥ !
ಒಡೆಯರನೊಡಗೊಡು ಬಂದು
ಕೈಗಡಿಗೆಯ ನೀರ ಕೈಯಲ್ಲಿ ಕೊಟ್ಟು
ಒಡೆಯರೇ ಕಾಲ ತೊಳಕೋ ಎಂಬವರ
ಮನೆಗೆ ಅಡಿ ಇಡಲಾಗದಯ್ಯ ಮೃಡಶರಣರು!
ಒಡಲಿಚ್ಛೆಗೆ ಬಡಮನವ ಮಾಡಿ,
ಹೊಕ್ಕುಂಬವರ ಎನಗೊಮ್ಮೆ ತೋರದಿರಾ ರಾಮನಾಥ ! ಅಡಗ ತಿಂಬರು ಕಣಕದಡಿಗೆ ಇರಲ್ಕೆ
ಸುರೆಯ ಕುಡಿವರು ಹಾಲಿರಲ್ಕೆ